
ಗೌಡಗೇರಾ–ಗೌಡಗೇರಾ ತಾಂಡಾದಲ್ಲಿ ಹಲವು ತಿಂಗಳಿಂದ ಪಡಿತರ ವಿತರಣೆ ಇಲ್ಲ
21 ಫಲಾನುಭವಿಗಳ ದೂರು; ದಾಖಲೆ ಪರಿಶೀಲಿಸಿ ತನಿಖೆ ನಡೆಸಿ, ಬಾಕಿ ಪಡಿತರ ಕೂಡಲೇ ವಿತರಿಸಲು ರಮೇಶ್ ಜೆ. ಚವ್ಹಾಣ್ ಆಗ್ರಹ
ಯಾದಗಿರಿ: ತಾಲೂಕಿನ ಕಿಲ್ಲನಕೇರಾ ಗ್ರಾಮದ ವ್ಯಾಪ್ತಿಯ ಗೌಡಗೇರಾ ಹಾಗೂ ಗೌಡಗೇರಾ ತಾಂಡಾದ ಹಲವು ಪಡಿತರ ಚೀಟಿದಾರರಿಗೆ ಕಳೆದ 1ರಿಂದ 4 ತಿಂಗಳವರೆಗೆ ಪಡಿತರ ದೊರೆತಿಲ್ಲ ಎಂಬ ದೂರುಗಳು ಕೇಳಿಬಂದಿವೆ.
ಪಡಿತರ ವಿತರಕರನ್ನು ವಿಚಾರಿಸಿದಾಗ, “ಮೇಲಿನಿಂದ ಪಡಿತರ ಬಂದಿದೆ, ಆದರೆ ಪ್ರಸ್ತುತ ನಮ್ಮ ಬಳಿ ಸ್ಟಾಕ್ ಇಲ್ಲ” ಎಂದು ತಿಳಿಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು 21 ಫಲಾನುಭವಿಗಳು ಪಡಿತರ ಸಿಗದಿರುವ ಬಗ್ಗೆ ದೂರು ನೀಡಿದ್ದು, ಇನ್ನೂ ಹಲವರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ.
ಸರ್ಕಾರದಿಂದ ಪಡಿತರ ಅಂಗಡಿಗೆ ಮಂಜೂರಾದ ಅಕ್ಕಿ, ಜೋಳ, ಗೋಧಿ ಸೇರಿದಂತೆ ಆಹಾರ ಧಾನ್ಯಗಳ ಪ್ರಮಾಣ ಎಷ್ಟು, ಫಲಾನುಭವಿಗಳಿಗೆ ಎಷ್ಟು ವಿತರಿಸಲಾಗಿದೆ ಹಾಗೂ ಪ್ರಸ್ತುತ ಸ್ಟಾಕ್ ಎಷ್ಟು ಇದೆ ಎಂಬುದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ 2028ರ ವಿಧಾನಸಭಾ ಕ್ಷೇತ್ರದ ಸೇವಾಕಾಂಕ್ಷಿ ರಮೇಶ್ ಜೆ. ಚವ್ಹಾಣ್ ಆಗ್ರಹಿಸಿದ್ದಾರೆ.
ಅಧಿಕಾರಿಗಳು ಸ್ಟಾಕ್ ರಿಜಿಸ್ಟರ್, ವಿತರಣಾ ದಾಖಲೆಗಳು, ಪಡಿತರ ಚೀಟಿ ಹಾಗೂ ಬಯೋಮೆಟ್ರಿಕ್ ದಾಖಲೆಗಳನ್ನು ಪರಿಶೀಲಿಸಿ, ಪಡಿತರ ವಿತರಣೆಯಲ್ಲಿ ಯಾವುದೇ ಲೋಪ ಅಥವಾ ಅಕ್ರಮ ನಡೆದಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ತಪ್ಪು ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಪಡಿತರ ಸಿಗದೆ ಬಾಕಿ ಉಳಿದಿರುವ ಎಲ್ಲಾ ತಿಂಗಳ ಧಾನ್ಯವನ್ನು ಅರ್ಹ ಫಲಾನುಭವಿಗಳಿಗೆ ಕೂಡಲೇ ವಿತರಿಸಬೇಕು. ಬಡವರ ಹಕ್ಕಿನ ಪಡಿತರ ಅವರಿಗೆ ಸಮರ್ಪಕವಾಗಿ ತಲುಪುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ರಮೇಶ್ ಜೆ. ಚವ್ಹಾಣ್ ತಿಳಿಸಿದ್ದಾರೆ.
Yadgir, Yadgir | Sep 30, 2026