
ಓಯೋ ಹೋಟೆಲ್ನಲ್ಲಿ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್: ಕೊಲೆ ಆರೋಪದ ಮೇಲೆ ಗೆಳೆಯ ಬಂಧನ
ಹೈದರಾಬಾದ್: ಓಯೋ ಹೋಟೆಲ್ನಲ್ಲಿ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ.
ಮೃತ ಯುವತಿಯನ್ನು ಶರೋನ್ ನಿಖಿತಾ ಟೋಪ್ನೊ (29) ಎಂದು ಗುರುತಿಸಲಾಗಿದ್ದು, ಆಕೆಯ ಗೆಳೆಯ ಶ್ರೀನಿವಾಸ್ ರವಿ ತೇಜನನ್ನು ಕೊಲೆ ಆರೋಪದ ಮೇಲೆ ಮಾಧಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆಪ್ಟೆಂಬರ್ 21ರಂದು ನಿಖಿತಾ ಮತ್ತು ರವಿತೇಜ ಮಾಧಾಪುರದ ಸಿದ್ದಿಕಿ ನಗರದ ರಸ್ತೆ ಸಂಖ್ಯೆ 5ರಲ್ಲಿರುವ ಹೋಟೆಲ್ನ ಕೊಠಡಿ ಸಂಖ್ಯೆ 304ರಲ್ಲಿ ತಂಗಿದ್ದರು. ಅದೇ ರಾತ್ರಿ ನಿಖಿತಾ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರುದಿನ ಬೆಳಗ್ಗೆ ನಿಖಿತಾ ಪ್ರಜ್ಞಾಹೀನಳಾಗಿದ್ದಾಳೆ ಎಂದು ರವಿತೇಜ ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದಾನೆ. ಸಿಬ್ಬಂದಿಯ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಬಳಿಕ ರವಿತೇಜ ಆಸ್ಪತ್ರೆಯಿಂದ ತೆರಳಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಖಿತಾ ಅವರ ಮುಖ ಮತ್ತು ತಲೆಯ ಮೇಲೆ ಗಾಯಗಳ ಗುರುತುಗಳು ಕಂಡುಬಂದಿದ್ದು, ಹೋಟೆಲ್ ಕೊಠಡಿಯ ಗೋಡೆ ಹಾಗೂ ಬೆಡ್ಶೀಟ್ಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ತನಿಖೆ ವೇಳೆ ರವಿತೇಜನ ಮೇಲೆ ಅನುಮಾನ ಬಲಗೊಂಡಿದ್ದು, ಆತನ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ನಡುವೆ ಆತ ಆತ್ಮಹತ್ಯೆಗೆ ಯತ್ನಿಸಿ ವಿಶಾಖಪಟ್ಟಣದ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಾಧಾಪುರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ನಿಖಿತಾ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ ಕಾರಣ ಆಕೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.
ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
Yadgir, Yadgir | Sep 30, 2026