
ಯಾದಗಿರಿಯಲ್ಲಿ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟನೆ
======================
ಯಾದಗಿರಿ, ಸೆಪ್ಟೆಂಬರ್. 30 : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು ಮತ್ತು ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಯಾದಗಿರಿ ಇವುಗಳ ಸಹಯೋಗದಲ್ಲಿ ಯಾದಗಿರಿಯ ತಾಲೂಕು ಸ್ತ್ರೀ ಶಕ್ತಿ ಭವನದಲ್ಲಿ ಹಮ್ಮಿಕೊಳ್ಳಲಾದ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಗ್ರಾಮೀಣ ಕೈಗಾರಿಕೆ ವಿಭಾಗದ ಉಪ ನಿರ್ದೇಶಕರಾದ ಮುಕುಂದರೆಡ್ಡಿ ಪಾಟೀಲ್, "ಉದ್ಯಮ ಪ್ರಾರಂಭಿಸಲು ಸರ್ಕಾರದಿಂದ ಹಲವು ಯೋಜನೆಗಳು ಲಭ್ಯವಿದ್ದು, ಸಾರ್ವಜನಿಕರು ಸರಿಯಾದ ಆಯ್ಕೆಗಳನ್ನು ಮಾಡಿಕೊಂಡು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ನಿರ್ದಿಷ್ಟ ಗುರಿ ಹಾಗೂ ಉದ್ದೇಶದೊಂದಿಗೆ ಶ್ರಮಿಸಿದಾಗ ಮಾತ್ರ ಯಶಸ್ಸು ಸಾಧ್ಯ, ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಸೆಯ್ಯದ್ ಅಶ್ಫಾಕ್ ಅಹ್ಮದ್ ಮಾತನಾಡಿ, ಈ 10 ದಿನಗಳ ತರಬೇತಿಯಲ್ಲಿ ಉದ್ಯಮ ಸ್ಥಾಪಿಸುವ ವಿಧಾನ, ಸಾಲ ಸೌಲಭ್ಯಗಳು, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಮೀಕ್ಷೆ, ಬ್ಯಾಂಕ್ ವ್ಯವಹಾರಗಳು ಹಾಗೂ ಸ್ವಯಂ ಉದ್ಯೋಗದ ಕುರಿತು ಸಂಪೂರ್ಣ ಮಾಹಿತಿ ಮತ್ತು ತರಬೇತಿ ನೀಡಲಾಗುವುದು ಎಂದು ಹೇಳಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಶ್ರೀಧರ ಮಾತನಾಡಿ, ಆರಂಭದಲ್ಲಿ ಸಣ್ಣ ಪ್ರಮಾಣದ ಉದ್ಯಮವನ್ನು ಆಯ್ಕೆ ಮಾಡಿಕೊಂಡು ಹಂತ-ಹಂತವಾಗಿ ಬೆಳೆಸಿದರೆ ಯಶಸ್ವಿ ಉದ್ಯಮಿಯಾಗಬಹುದು ಎಂದರು.
ಕಾರ್ಯಕ್ರಮದಲ್ಲಿ ಯಶಸ್ವಿ ಉದ್ಯಮಿ ಶ್ರೀಮತಿ ಶಮಶದ ಖಾನಂ ಅವರು ಭಾಗವಹಿಸಿ ತಮ್ಮ ಉದ್ಯಮ ಪಯಣದ ಅನುಭವಗಳನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಂಡರು.
ಸಿಡಾಕ್ ಯಾದಗಿರಿಯ ತರಬೇತಿದಾರರಾದ ಮಲ್ಲಪ್ಪ ಟಿ. ಮೇತ್ರೆ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Yadgir, Yadgir | Sep 30, 2026