
ಗಣೇಶ ವಿಸರ್ಜನೆ ವೇಳೆ ತಂಟೆ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ — 4 ಮಂದಿ ಬಂಧನ
ಬೆಳಗಾವಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಉಂಟಾದ ಕ್ಷುಲ್ಲಕ ವಿಚಾರದ ಜಗಳ ಮುಂದುವರಿದು, ಇಬ್ಬರ ಮೇಲೆ ಕಲ್ಲು ಹಾಗೂ ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ನಾಲ್ವರನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೆ.27ರಂದು ರಾತ್ರಿ ಸುಮಾರು 11 ಗಂಟೆ ವೇಳೆಗೆ ಬೆಳಗಾವಿ ನಗರದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಖಡಕಗಲ್ಲಿ ಗಣಪತಿ ಮಂಡಳಿ ಹಾಗೂ ತೆಂಗಿನಕೇರಿ ಗಣೇಶ ಮಂಡಳಿ ಹುಡುಗರ ನಡುವೆ ಕ್ಷುಲ್ಲಕ ಕಾರಣಕ್ಕೆ ತಂಟೆ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಕಿ ಎ1 ಆರೋಪಿ ರೋಹಿತ್ ಶಿಂಧೆ ಎಂಬಾತನಿಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎಂದು ತಿಳಿದುಬಂದಿದೆ.
ಈ ವಿಚಾರ ತಿಳಿದು ಫಿರ್ಯಾದಿದಾರ ಆದಿತ್ಯ ರಾಜು ಅಳನಾನಿ (22) ಹಾಗೂ ಇತರರು ಬೆಂಡಿ ಬಜಾರ್ ಸರ್ಕಲ್–ತೆಂಗಿನಕೇರಿ ಗಲ್ಲಿ ಕಾರ್ನರ್ ಬಳಿ ತೆರಳಿ, ರೋಹಿತ್ ಶಿಂಧೆಗೆ ಏಕೆ ಬೈಯುತ್ತಿದ್ದೀರಿ ಎಂದು ಪ್ರಶ್ನಿಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿತರು ಗುಂಪಾಗಿ ಸೇರಿಕೊಂಡು ಅವರನ್ನು ಅಡ್ಡಗಟ್ಟಿ, ಕೊಲೆ ಮಾಡುವ ಉದ್ದೇಶದಿಂದ ಕಲ್ಲು ಹಾಗೂ ಕಟ್ಟಿಗೆಯಿಂದ ಆದಿತ್ಯ ರಾಜು ಅಳನಾನಿ ಹಾಗೂ ಓಂಕಾರ ಮಹೇಂದ್ರ ಶಿಂಧೆ ಅವರ ತಲೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಆದಿತ್ಯ ರಾಜು ಅಳನಾನಿ ಅವರು ಸೆ.28ರಂದು ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾರ್ಕೆಟ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 210/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣದ ತನಿಖೆಗಾಗಿ ಸಹಾಯಕ ಪೊಲೀಸ್ ಆಯುಕ್ತರಾದ ಸಂತೋಷ ಡಿ. ಸತ್ಯನಾಯಿಕ, ಮಾರ್ಕೆಟ್ ಉಪವಿಭಾಗ, ಬೆಳಗಾವಿ ನಗರ ಅವರ ಮಾರ್ಗದರ್ಶನದಲ್ಲಿ, ಮಾರ್ಕೆಟ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಅವರ ನೇತೃತ್ವದಲ್ಲಿ ಹಾಗೂ ಪಿಎಸ್ಐ ಮಣಿಕಂಠ ಪೂಜಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ:
1. ರಾಜು ಶೆಡಗೆ (25) – ತೆಂಗಿನಕೇರಿ ಗಲ್ಲಿ, ಬೆಳಗಾವಿ
2. ವಿಶಾಲ ತುಕಾರಾಮ ತಹಶೀಲ್ದಾರ (41) – ತೆಂಗಿನಕೇರಿ ಗಲ್ಲಿ, ಬೆಳಗಾವಿ
3. ಸತೀಶ ನಂದು ಘಸಾರಿ (46) – ತೆಂಗಿನಕೇರಿ ಗಲ್ಲಿ, ಬೆಳಗಾವಿ
4. ವಿನಿತ ವಿನಾಯಕ ಮಡಮಂಜಿ (18) – ಮಾಳಿಗಲ್ಲಿ, ಬೆಳಗಾವಿ
ಇವರನ್ನು ಸೆ.28ರಂದು ಬಂಧಿಸಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪ್ರಕರಣದಲ್ಲಿ ಇನ್ನೂ ಹಲವು ಆರೋಪಿತರು ಪರಾರಿಯಾಗಿದ್ದು, ಅವರ ಪತ್ತೆಗಾಗಿ ವಿಶೇಷ ತಂಡ ಕಾರ್ಯಾಚರಣೆ ಮುಂದುವರಿಸಿದೆ.
ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.
#Belagavi #BelagaviPolice #MarketPolice #CrimeNews #BreakingNews #KannadaNews #YadgirNews
Yadgir, Yadgir | Sep 30, 2026